ವಾಲ್ಟನ್, ಐಜಕ್
	1593-1683. ಇಂಗ್ಲಿಷ್ ಗದ್ಯ ಬರೆಹಗಾರ, ರೈತನ ಮಗ. ವ್ಯಾಪಾರಿಯಾಗಿ ನೆಮ್ಮದಿಯಾಗಿರುವಷ್ಟು ಹಣ ಗಳಿಸಿ ಐವತ್ತನೆಯ ವರ್ಷದಿಂದ ವಿರಾಮ ಜೀವನವನ್ನು ನಡೆಸಿದ ಇವನಿಗೆ ಮೀನು ಹಿಡಿಯುವ ಆಸಕ್ತಿಯಿತ್ತು. ಈತ ಸುಪ್ರಸಿದ್ಧ  ಕವಿಗಳಾದ ಜಾನ್ ಡನ್, ವಾಟನ್, ಸ್ಯಾಂಡರ್ಸನ್ ಮೊದಲಾದವರ ಸ್ನೇಹಿತನಾಗಿದ್ದ. ಹಾಗಾಗಿ ಡನ್(1640), ವಾಟನ್(1651), ಹೂಕರ್(1665), ಜಾರ್ಜ್ ಹರ್ಬರ್ಟ್(1670) ಮತ್ತು ಸ್ಯಾಂಡರ್ಸನ್ (1678)-ಇವರ ಜೀವನ ಚರಿತ್ರೆಗಳನ್ನು ಬರೆದಿದ್ದಾನೆ. ಮೃದುತನ ಮತ್ತು ಮೆಚ್ಚುಗೆ ಈ ಜೀವನ ಚರಿತ್ರೆಗಳಲ್ಲಿನ ಮುಖ್ಯ ಲಕ್ಷಣ. ಇವನ ದ ಕಂಪ್ಲೀಟ್ ಆಂಗ್ಲರ್ ಆರ್ ದ ಕಾಂಟೆಂಪ್ಲೇಟಿವ್ ಮ್ಯಾನ್ಸ್ ರಿಕ್ರಿಯೇಷ್‍ನ್ಸ್(1653) ಆಕರ್ಷಕ ಗದ್ಯಕೃತಿ. ಮೀನುಹಿಡಿಯುವ ಕಲೆ-ಮನರಂಜನೆಯನ್ನು ಕುರಿತ ಪುಸ್ತಕವೆಂದು ಹೊರನೋಟಕ್ಕೆ ತೋರಿದರೂ ಎಲ್ಲಿಯೂ ಸ್ವಾರಸ್ಯ ಕುಂದದ, ಜೀವಂತ ಪಾತ್ರಗಳ ನಡೆ, ನುಡಿಗಳನ್ನು ಚಿತ್ರಿಸುವ ಸೊಗಸಾದ ಕೃತಿ. ಮೊದಲು ಗ್ರಂಥಕರ್ತೃವಾದ ಪಿಸ್ಕೆಟರ್ (ಮೀನು ಹಿಡಿಯುವವನು), ಆಸೆಸ್ಸ್ (ಹಕ್ಕಿ ಹಿಡಿಯುವವನು) ಮತ್ತು ವಿನೇಟರ್ (ಬೇಟೆಗಾರ) ಇವರ ನಡುವೆ, ಅನಂತರ ಪಿಸ್ಕೆಟರ್ ಮತ್ತು ವಿನೇಟರ್‍ರ ನಡುವೆ ಸಂಭಾಷಣೆಯ ರೂಪದಲ್ಲಿ ಮೊದಲು 1653ರಲ್ಲಿ ಪ್ರಕಾಶಿತವಾದ ಈ ಗ್ರಂಥವನ್ನು ಐಜಕ್ ಎರಡನೆಯ ಆವೃತ್ತಿಗಾಗಿ 1655ರಲ್ಲಿ ಹೆಚ್ಚು ಕಡಿಮೆ ಪುನಾರಚಿಸಿದ. ಇದು ಗಾತ್ರದಲ್ಲಿ ಮೊದಲನೆಯ ಆವೃತ್ತಿಯ ಅರ್ಧದಷ್ಟಾಯಿತು. ಮೀನು ಹಿಡಿಯುವುದನ್ನು ತಿಳಿಸುವ ಈ ಕೃತಿ ಜನಪದ ಹಾಡುಗಳನ್ನೊಳಗೊಂಡಿದೆ ಹಾಗೂ ಆ ಮುಂಚಿನ ಲೇಖಕರ ಅನುಭವಗಳನ್ನು ಉಲ್ಲೇಖಿಸುತ್ತದೆ. ಆ ಕಾಲದಲ್ಲಿ ಲಭ್ಯವಿದ್ದ ಪ್ರವಾಸಿಗರ ತಂಗುದಾಣಗಳು ಮತ್ತು ಸುಮಧುರವಾಗಿ ಹಾಡುವ ಗೊಲ್ಲತಿಯರ ಬಗ್ಗೆಯೂ ಈ ಕೃತಿ ತಿಳಿಸುತ್ತದೆ.		
	(ಎಲ್.ಎಸ್.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ